ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸದಸ್ಯರ ವರ್ತನೆಯು ಸರಿಯಿಲ್ಲ. ಹಾಗಾಗಿ, ನಾನು ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಬಸವರಾಜ ಹೊರಟ್ಟಿ ಇಂದು (ಮಾರ್ಚ್ 23) ಬೆಳಗ್ಗೆ ಅಷ್ಟೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈಗಾಗಲೇ ಅವರು ರಾಜೀನಾಮೆ ಪತ್ರವನ್ನು ಉಪಸಭಾಪತಿಗೆ ರವಾನಿಸಿರುವುದು ಬೆಳಕಿಗೆ ಬಂದಿದೆ.
ಹೊರಟ್ಟಿ ರಾಜೀನಾಮೆ ಪತ್ರದಲ್ಲಿ ಏನಿದೆ?
ಇನ್ನು ಬಸವರಾಜ್ ಹೊರಟ್ಟಿ ಅವರು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಇಂದು (ಮಾರ್ಚ್ 23) ಬೆಳಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅವರು ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ಪರಿಷತ್ ಉಪಸಭಾಪತಿ ಪ್ರಾಣೇಶ್ ಅವರಿಗೆ ರವಾನಿಸಿರುವುದು ಬೆಳಕಿಗೆ ಬಂದಿದೆ. ಹೌದು..ಮಾರ್ಚ್ 18ರಂದೇ ಹೊರಟ್ಟಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಾಣೇಶ್ ಅವರಿಗೆ ಕಳುಹಿಸಿದ್ದು, ದಿನಾಂಕ 1-4-25ರಂದು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ವೈಯಕ್ತಿ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದು, ಸದರಿ ರಾಜೀನಾಮೆಯನ್ನು 31-3-25ರೊಳಗೆ ಸ್ವೀಕರಿಸಿ ದಿನಾಂಕ 1-4-2025ರಿಂದ ಅನ್ವಯವಾಗುವಂತೆ ಕ್ರಮಕೈಗೊಂಡು ಹಾಗೂ ನನನ್ನು ಈ ಹುದ್ದೆಯಿಂದ ಮುಕ್ತಿಗೊಳಿಸಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಹೊರಟ್ಟಿ ತಮ್ಮ ರಾಜೀನಾಮೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬೆಳಗ್ಗೆ ಅಷ್ಟೇ ರಾಜೀನಾಮೆ ಬಗ್ಗೆ ಮಾತನಾಡಿದ್ದ ಹೊರಟ್ಟಿ
ಮಾ. 23ರಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾಡಿರುವ ಹೊರಟ್ಟ, ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಹಾಗೂ ನಾನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಇಂದಿನ ದಿನಗಳಲ್ಲಿ ಸದನಗಳನ್ನು ನಿರ್ವಹಿಸುವುದು ಕಷ್ಟ ಎಂಬುದು ಅರ್ಥವಾಗಿದೆ. ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.
ಸದನದಲ್ಲಿ ನಡೆಯುತ್ತಿರುವ ಘಟನೆಗಳಿಂದ ನನಗೆ ಬೇಜಾರಾಗಿದೆ. ಸಭಪತಿಗೆ ಹೇಳೋದಿಲ್ಲ ಕೇಳೋದಿಲ್ಲ. ಸದನದೊಳಗೆ ಪ್ರತಿಭಟನೆ ನಡೆಸುತ್ತಾರೆ. ಪರಿಷತ್ಗೆ ಪ್ಲೇ ಕಾರ್ಡ್‌ಗಳನ್ನು ತೆಗೆದುಕೊಂಡು ಬರುತ್ತಾರೆ. ಸದನ ನಡೆಸುವುದಕ್ಕೆ ನನಗೆ ಯೋಗ್ಯತೆ ಇಲ್ಲ. ಮೊನ್ನೆ ನಾನು 17 ನಿಮಿಷ ಸುಮ್ಮನೆ ಕುತ್ತಿದ್ದೆ. ಇದರಿಂದ ನಾನು ಸದನದಲ್ಲಿ ಇರಬಾರದು ಎಂದು ತೀರ್ಮಾನ ಮಾಡಿದ್ದೇನೆ. 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಸದನದಲ್ಲಿ ಯಾರೂ ಗೌರವ ಕೊಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.
ಈ ಹಿಂದೆಯೂ ರಾಜೀನಾಮೆ ಬಗ್ಗೆ ಮಾತನಾಡಿದ್ದ ಹೊರಟ್ಟಿ
ಬಸವರಾಜ್ ಹೊರಟ್ಟಿ ಅವರು ಹಿಂದೆಯೇ ರಾಜೀನಾಮೆ ಮಾತನಾಡಿದ್ದರು. ಇತ್ತೀಚೆಗೆ ಮೇಲ್ಮನೆಯಲ್ಲಿ ಸಭಾಪತಿ ಹೊರಟ್ಟಿಯವರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕಾಂಗ್ರೆಸ್ ಸಜ್ಜಾಗಿತ್ತು. ಆಗಲೇ ಈ ಬಗ್ಗೆ ಎದ್ದಿದ್ದ ಊಹಾಪೋಹಗಳ ಬಗ್ಗೆ ಮಾತನಾಡಿದ್ದ ಹೊರಟ್ಟಿಯವರು, ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದರೆ, ಅದಕ್ಕೂ ಮುನ್ನವೇ ನಾನೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ನಾನು ಹಿಂದೆ ಮೇಷ್ಟ್ರು ಆಗಿದ್ದವನು. ಅಲ್ಲಿಂದ ಇಲ್ಲಿಯವರೆಗೆ ಸಾಗಿ ಬಂದಿದ್ದೇನೆ. ನನ್ನ ಈ ಸಾಧನೆಯ ಬಗ್ಗೆ ತೃಪ್ತಿಯಿದೆ. ಹಾಗಾಗಿ, ಯಾವುದೇ ಕ್ಷಣದಲ್ಲಿ ಸಭಾಪತಿ ಸ್ಥಾನ ತ್ಯಜಿಸುವ ಸಂದರ್ಭ ಬಂದರೆ ಖಂಡಿತವಾಗಿಯೂ ಆ ಸ್ಥಾನ ತ್ಯಜಿಸಿ ಮತ್ತೆ ನನ್ನ ಶಿಕ್ಷಕ ವೃತ್ತಿಗೆ ಹೋಗುತ್ತೇನೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.