ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು. ಒಂದು ವೇಳೆ ನ್ಯಾಯಬೆಲೆ ಅಂಗಡಿಯವರು ಕಡಿಮೆ ಪ್ರಮಾಣ ವಿತರಿಸಿದಲ್ಲಿ ಉಚಿತ ದೂರವಾಣಿ ಸಂಖ್ಯೆ: 1967 ಅಥವಾ ತಹಶೀಲದಾರ ಕಛೇರಿ ಅಥವಾ ಜಂಟಿ ನಿರ್ದೇಶಕರ ಕಛೇರಿ ಆಹಾರ ಇಲಾಖೆ ಇವರಿಗೆ ದೂರು ಸಲ್ಲಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್) ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ (ಎನ್‍ಎಫ್‍ಎಸ್‍ಎ) ಯಡಿ ವಿತರಿಸಲಾಗುವ 5 ಕೆಜಿ ಆಹಾರಧಾನ್ಯದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 5 ಕೆಜಿ ಆಹಾರಧಾನ್ಯದ ಬದಲಾಗಿ ಪ್ರತಿ ಕೆಜಿಗೆ ರೂ.34 ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ ಖಾತೆಗೆ ಡಿಬಿಟಿ ಮೂಲಕ ರೂ.170 ರಂತೆ ಹಣವನ್ನು ವರ್ಗಾಯಿಸಲಾಗಿರುತ್ತದೆ.
ಆದರೆ ಫೆಬ್ರವರಿ-2025 ನೇ ತಿಂಗಳಿನಿಂದ ಹಣದ ಬದಲಾಗಿ ಅಕ್ಕಿಯನ್ನೇ ನೀಡುವ ಕುರಿತು ಸರ್ಕಾರವು ತೀರ್ಮಾನಿಸಿ, ಆದೇಶವನ್ನು ಹೊರಡಿಸಿದೆ. ಫೆಬ್ರವರಿ-2025ನೇ ಮಾಹೆಗೆ ಸಂಬಂಧಿಸಿದ 5 ಕೆಜಿ ಅಕ್ಕಿಯನ್ನು ಮಾರ್ಚ-2025 ನೇ ತಿಂಗಳ ಪಡಿತರ ವಿತರಣೆಯಲ್ಲಿ ಸೇರ್ಪಡೆಗೊಳಿಸಿ, ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರು ಹಂಚಿಕೆ ಮಾಡಿರುತ್ತಾರೆ.
ಅಂದರೆ ಫೆಬ್ರವರಿ-2025ನೇ ಮಾಹೆಯ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಹಾಗೂ ಮಾರ್ಚ-2025ನೇ ಮಾಹೆಯ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಮತ್ತು ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 5 ಕೆಜಿ ಅಕ್ಕಿ ಒಟ್ಟು ಆದ್ಯತಾ ಪಡಿತರ ಚೀಟಿಗೆ ಮಾರ್ಚ-2025ನೇ ಮಾಹೆಯಲ್ಲಿ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ 15 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವದು. ಅಂತ್ಯೋದಯ ಪಡಿತರ ಚೀಟಿಯಲ್ಲಿರುವ ಒಬ್ಬ, ಇಬ್ಬರು ಮತ್ತು ಮೂರು ಜನ ಸದಸ್ಯರಿಗೆ 35 ಕೆಜಿ ಅಕ್ಕಿ, ನಾಲ್ಕು ಜನ ಸದಸ್ಯರಿದ್ದರೆ 45 ಕೆಜಿ ಅಕ್ಕಿ, ಐದು ಜನ ಸದಸ್ಯರಿದ್ದರೆ 65 ಕೆಜಿ ಅಕ್ಕಿ, ಆರು ಜನ ಸದಸ್ಯರಿದ್ದರೆ 85 ಕೆಜಿ ಅಕ್ಕಿ, 7 ಜನ ಸದಸ್ಯರಿದ್ದರೆ 105 ಕೆಜಿ ಅಕ್ಕಿ ಹಾಗೂ 10 ಕ್ಕಿಂತ ಮೇಲ್ಪಟ್ಟು ಸದಸ್ಯರು ಇದ್ದಲ್ಲಿ ಇದೇ ಅನುಪಾತ ಮುಂದುವರೆಸಿ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.