ಕರಾವಳಿಯಲ್ಲಿ ಇನ್ನೆರಡು ದಿನ ಬಿಸಿಗಾಳಿ ಎಚ್ಚರಿಕೆ: ಮುನ್ನೆಚ್ಚರಿಕೆಗೆ ಜಿಲ್ಲಾಡಳಿತ ಸೂಚನೆ Dakshina Kannada/ Udupi


ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಬಿಸಿ ಗಾಳಿ ಬೀಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ 40 ಡಿ.ಸೆ.ಗಿಂತಲೂ ಅಧಿಕ ತಾಪಮಾನ ದಾಖಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಹೀಟ್‌ ವೇವ್‌ ಸ್ಟ್ರೋಕ್‌(ಶಾಖದ ಅಲೆ)ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಎಲ್ಲಿ ಎಷ್ಟು ತಾಪಮಾನ?
ಕೆಎಸ್‌ಎನ್‌ಡಿಎಂಸಿ ಮಾಹಿತಿಯಂತೆ ದ.ಕ.ದ ಸುಳ್ಯದಲ್ಲಿ 40.4 ಡಿ.ಸೆ., ಉಪ್ಪಿನಂಗಡಿ-39.6, ಪಾಣೆ ಮಂಗಳೂರು-39.4,. ಕೊಕ್ಕಡ 40.4, ಉಡುಪಿ ಜಿಲ್ಲೆಯ ಬ್ರಹ್ಮಾವರ-39.1, ಕೋಟ- 39.5, ವಂಡ್ಸೆ-39.9, ಅಜೆಕಾರು-39.5, ಉ.ಕನ್ನಡ ಜಿಲ್ಲೆಯ ಸಾವಂತ್ವಾಡ 41.1, ಭಟ್ಕಳ-40.4, ಬೆಳಿಕೆರೆ-39.8, ಮಾವಳ್ಳಿ-39, ಮಾವಿನಕುರುವೈ-39.5, ಗಡಸಾಯ- 40.7, ಮಿರ್‌ಜಾನ್‌-40.5, ಹೊನ್ನಾವರ- 39.4, ಬಸಗೋಡು-40.1 ಡಿ.ಸೆ. ತಾಪಮಾನ ದಾಖ ಲಾಗಿದೆ. ಮುಂದಿನ ಎರಡು ದಿನಗಳ ಕಾಲ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ.

ಮುನ್ನೆಚ್ಚರಿಕೆಗೆ ಸೂಚನೆ
ಪ್ರಸ್ತುತ ಹಾಗೂ ಮುಂಬರುವ ಬೇಸಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ., ಉಡುಪಿ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರವು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.

-ಮಧ್ಯಾಹ್ನ 12ರಿಂದ 3ರ ವರೆಗೆ ಬಿಸಿಲಿನಲ್ಲಿ ಹೋಗುವುದನ್ನು ಹಾಗೂ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ಸಾಧ್ಯವಾದಷ್ಟು ಹಗುರ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಬೇಕು. -ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸಬೇಕು.
-ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್‌, ಚಹಾ, ಕಾಫಿ ಮತ್ತು ಕಾಬೋನೇಟೆಡ್‌ ತಂಪು ಪಾನೀಯಗಳನ್ನು ಬಳಸಬಾರದು.
-ಹೆಚ್ಚಿನ ಪ್ರೊಟೀನ್‌ ಆಹಾರವನ್ನು ತಪ್ಪಿಸಬೇಕು ಮತ್ತು ತಾಜಾ ಆಹಾರ ಸೇವಿಸಬೇಕು. ಹೊರಗೆ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿ ಬಳಸಬೇಕು. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಬೇಕು.
-ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಮೂಛೆì ಅಥವಾ ಅನಾರೋಗ್ಯ ಅನಿಸಿದ್ದಲ್ಲಿ ತತ್‌ಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.
– ಒ.ಆರ್‌.ಎಸ್‌., ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಬೇಕು. ಇದು ದೇಹವನ್ನು ಮರು- ಜಲೀಕರಣ ಮಾಡಲು ಸಹಾಯ ಮಾಡುತ್ತದೆ. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಬೇಕು. ಹಾಗೂ ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಬೇಕು. ಮನೆಯನ್ನು ತಂಪಾಗಿ ಇರಿಸಬೇಕು. ಪರದೆಗಳು, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು. ರಾತ್ರಿಯಲ್ಲಿ ಕಿಟಕಿಗಳನ್ನು ತೆರೆದಿಡಬೇಕು. ಫ್ಯಾನ್‌, ಒದ್ದೆ ಬಟ್ಟೆಗಳನ್ನು ಬಳಸಬೇಕು. ತಣ್ಣೀರಿನಲ್ಲಿ ಸ್ನಾನ ಮಾಡುವುದು ಉತ್ತಮ.
-ಸನ್‌ಸ್ಟ್ರೋಕ್‌ಗೆ ಒಳಗಾಗಿದ್ದ ವ್ಯಕ್ತಿಯನ್ನು ತಂಪಾದ ಸ್ಥಳದಲ್ಲಿ ನೆರಳಿನ ಕೆಳಗೆ ಇರಿಸಿ, ಅವರನ್ನು ಒದ್ದೆ ಬಟ್ಟೆಯಿಂದ ಒರೆಸಿ/ಆಗಾಗ ದೇಹವನ್ನು ತೊಳೆಯಬೇಕು. ತಲೆಯ ಮೇಲೆ ಸಾಮಾನ್ಯ ತಾಪಮಾನದ ನೀರನ್ನು ಸುರಿಯಬೇಕು. ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು ಮುಖ್ಯ ವಿಷಯ.
-ವ್ಯಕ್ತಿಗೆ ಒ.ಆರ್‌.ಎಸ್‌. ಕುಡಿಯಲು ಅಥವಾ ನಿಂಬೆ ಶರ್ಬತ್‌/ತೋರಣಿ ಅಥವಾ ದೇಹವನ್ನು ಪುನರ್ಜಲೀಕರಣಗೊಳಿಸಲು ಉಪಯುಕ್ತವಾದ ಯಾವುದನ್ನಾದರೂ ನೀಡಬೇಕು. ತತ್‌ಕ್ಷಣ ವ್ಯಕ್ತಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು.
-ಬಿಸಿಲಿನಿಂದ ಮನೆಗೆ ಬಂದ ಕೂಡಲೇ ಅತಿಯಾದ ತಂಪು ನೀರು ಕುಡಿಯಬಾರದು. ಎ.ಸಿ./ ಕೂಲರ್‌ಗಳನ್ನು ಕೂಡಲೇ ಬಳಸುವುದು ಸೂಕ್ತವಲ್ಲ.