Dinesh Gundu Rao: ಪ್ರಾದೇಶಿಕ ಆಸ್ಪತ್ರೆಯಾಗಿ ವೆನ್ಲಾಕ್‌: ದಿನೇಶ್ ಗುಂಡೂರಾವ್ ಭರವಸೆ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿ ನಲ್ಲಿರುವ ವೆನ್ಲಾಕ್‌ ಆಸ್ಪತ್ರೆ ಮತ್ತು ಲೇಡಿಗೋಶನ್‌ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯನ್ನಾಗಿ ಮಾರ್ಪಾಡಿಸಲಾಗುವುದು ಮತ್ತು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಲು ಯತ್ನಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದ್ದಾರೆ.

ವೆನ್ಲಾಕ್‌ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಐವನ್‌ ಡಿ’ಸೋಜಾ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ವೆನ್ಲಾಕ್‌ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳಿವೆ. ಆದರೆ ನಮ್ಮಲ್ಲಿ ಪ್ರಾದೇಶಿಕ ಆಸ್ಪತ್ರೆ ಎಂದು ಘೋಷಿಸುವ ಕ್ರಮವಿಲ್ಲ. ಒಂದು ಆಸ್ಪತ್ರೆ ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿದಾಗ ಅಲ್ಲಿ ನೀಡಬೇಕಿರುವ ಸಿಬಂದಿ, ಚಿಕಿತ್ಸೆ, ಸವಲತ್ತುಗಳ ಬಗ್ಗೆ ಮಾನದಂಡಗಳಿವೆ. ಆದರೆ ವಿಭಾಗೀಯ ಅಥವಾ ಪ್ರಾದೇಶಿಕ ಆಸ್ಪತ್ರೆ ಎಂದು ಮೇಲ್ದರ್ಜೆಗೆ ಏರಿಸುವ ಕ್ರಮವಿಲ್ಲ ಎಂದು ಹೇಳಿದರು.

ಆದರೆ ಪಟ್ಟು ಬಿಡದ ಕಾಂಗ್ರೆಸ್‌ ಶಾಸಕರಾದ ಮಂಜುನಾಥ ಭಂಡಾರಿ ಮತ್ತು ಐವನ್‌ ಅವರು, ಮಂಗಳೂರಿನ ಆಸ್ಪತ್ರೆಗೆ 15 ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ. ದಿನಕ್ಕೆ 1,500ಕ್ಕೂ ಹೆಚ್ಚು ಹೊರ ರೋಗಿಗಳು 150ಕ್ಕೂ ಹೆಚ್ಚು ಒಳರೋಗಿಗಳು ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಸ್ಥಳಾವಕಾಶವಿಲ್ಲ. ಸಿಬಂದಿಯ ಕೊರತೆಯಿದೆ, ಆದ್ದರಿಂದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲೇಬೇಕು ಎಂದು ಆಗ್ರಹಿಸಿದರು.

ಆಗ ದಿನೇಶ್‌ ಗುಂಡೂರಾವ್‌ ಬಳಿಯೇ ಕೂತಿದ್ದ ಸಚಿವ ಎಚ್‌.ಕೆ. ಪಾಟೀಲ್‌ ಸಹ ಮೆಲ್ಲ ದನಿಗೂಡಿಸಿ, ಮಾಡಿ ಬಿಡಿ ಎಂದು ಹೇಳಿದರು. ಇದನ್ನು ಉಲ್ಲೇಖಿಸಿದ ದಿನೇಶ್‌ ಗುಂಡೂರಾವ್‌ ವೆನ್ಲಾಕ್‌ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯನ್ನಾಗಿ ಮಾಡುವುದಾಗಿ ಪ್ರಕಟಿಸಿದರು.

ಇನ್ನು ಪಿಲಿಕುಳದ ಬಳಿಯಿರುವ ಟಿಬಿ ಆಸ್ಪತ್ರೆಗೆ ಸೇರಿದ 8 ಎಕರೆ ಜಾಗವನ್ನು ವೆನ್ಲಾಕ್‌ ಆಸ್ಪತ್ರೆ ಬಳಸಿಕೊಂಡು ಅಲ್ಲಿ ಯಾವುದಾರೂ ಒಂದು ಚಿಕಿತ್ಸಾ ಘಟಕ ಆರಂಭಿಸುವಂತೆ ಮಂಜುನಾಥ ಭಂಡಾರಿ ಸಲಹೆ ನೀಡಿದರು.