ಬಂಧಿತರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ನಡೆಯುತ್ತಿದೆ.
ಕೇರಳ ಇಡುಕ್ಕಿ ಉಪ್ಪತ್ತೋಡು ಮಟ್ಟೆಪಲ್ಲಿ ನಿವಾಸಿ ಮುರಳಿ (55) ಕಾಂಇನ್‌ಗಾಡ್ ಬೆಳ್ಳಿಕೋತ್ ಇಟ್ಟಂಮಿಲ ಹೌಸ್ ನಿವಾಸಿ ಅರ್ಷಾದ್. ಬಂಧಿತರು. ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ .
ಘಟನೆಯ ವಿವರ: ಕೇರಳ ಮೂಲದ ಅರ್ಷಾದ್, ಮುರಳಿ ಮತ್ತು ಅಬ್ದುಲ್ ಲತೀಫ್ ಶನಿವಾರ ರಾತ್ರಿ ಕೇರಳದಿಂದ ಸಂಜೆ 4 ಕ್ಕೆ ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದ್ದು, ರಾತ್ರಿ 8.30 ಕ್ಕೆ ರಿಕ್ಷಾದಲ್ಲಿ ದೇರಳಕಟ್ಟೆಗೆ ಬಂದಿಳಿದಿದ್ದರು. ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್ ಗೆ ಕನ್ನ ಹಾಕುವ ಉದ್ದೇಶದಿಂದ ಜನಸಂಚಾರ ಕಡಿಮೆಯಾಗುವವರೆಗೆ ದೇರಳಕಟ್ಟೆ ಸುತ್ತಮುತ್ತ ತಿರುಗಾಡುತ್ತಿದ್ದರು.
ಸೋಮವಾರ ಈದ್ ಉಲ್ ಫಿತರ್ ಆಚರಣೆಯ ಹಿನ್ನಲೆಯಲ್ಲಿ ದೇರಳಕಟ್ಟೆಯಲ್ಲಿ ಸುಮಾರು 12 ಗಂಟೆಯವರೆಗೂ ಅಂಗಡಿ ಮುಗ್ಗಟ್ಟುಗಳು ವ್ಯವಹಾರ ನಡೆಸಿದ್ದವು. ಜನ ಸಂಚಾರ ಸಂಪೂರ್ಣ ಕಡಿಮೆಯಾಗುವವರೆಗೆ ಕಾದ ದರೋಡೆಕೋರರು, ಸುಮಾರು 1 ಗಂಟೆ ಸುಮಾರಿಗೆ ಫೈನಾನ್ಸ್‌ನ ಕಟ್ಟಡದ ಹಿಂಬದಿಯ ಬಾಗಿಲಿನ ಬೀಗ ಮುರಿದು ಮೊದಲನೇ ಮಹಡಿ ಪ್ರವೇಶಿಸಿದ್ದರು.
ಬ್ಯಾಂಕಿರುವ ಮಹಡಿಗೆ ಬರಲು ಕನ್ನ ಕೊರೆಯಲು ಒಬ್ಬಾತ ಡ್ರಿಲ್ ಮಿಷನ್ ಜೋಡಿಸುತ್ತಿದ್ದರೆ, ಇನ್ನಿಬ್ಬರು ಆಲರಾಂ ಡಿವೈಸ್‌ನ ವಯರ್ ತುಂಡರಿಸಿ ಷಟರ್ ತೆಗೆಯಲು ಪ್ರಯತ್ನಿಸಿದರು. ಅಷ್ಟರಲ್ಲಿ ಡಿವೈಸ್‌ನಿಂದ ಫೈನಾನ್ಸ್‌ನ ಕೇಂದ್ರ ಕಚೇರಿಗೆ ಅಲಾರಾಂ ಕರೆ ಹೋಗಿದ್ದು, ಸಿಸಿಟಿವಿ ತಪಾಸಣೆ ಮಾಡಿದಾಗ ಮೂವರ ಚಲನವಲನ ಪತ್ತೆಯಾಯಿತು. ಕೂಡಲೇ ಬ್ಯಾಂಕ್‌ನಿಂದ ಸಿಬಂದಿಗೆ ಮಾಹಿತಿ ಹೋಗಿ, ಪೊಲೀಸರಿಗೆ ತಿಳಿಸಲಾಯಿತು.
ಅಷ್ಟರಲ್ಲಿ ಸೈರನ್ ಶಬ್ದ ಕೇಳಿ ಸ್ಥಳೀಯರೂ ದೌಡಾಯಿಸಿದರು. ಅಷ್ಟರಲ್ಲಿ ಅಬ್ದುಲ್ ಲತೀಫ್ ಪರಾರಿಯಾದರೆ, ಮುರಳಿ ಮರವೊಂದರ ಮೂಲಕ ಕೆಳಗೆ ಜಿಗಿದು ಓಡಲು ಪ್ರಯತ್ನಿಸಿ ಕೆಳಬಿದ್ದು ಜನರ ಕೈಗೆ ಸಿಕ್ಕ. ಅರ್ಷಾದ್ ಕಟ್ಟಡದ ಮೇಲೆ ಡ್ರಿಲ್ ಮಿಷನ್ ಜೋಡಿಸುತ್ತಿದ್ದವ, ಕೆಳಗೆ ಬರಲಾಗದೆ ಮೇಲೆಯೇ ಪೊಲೀಸರ ವಶವಾಗಿದ್ದ. ಮುರಳಿ ಮತ್ತು ತಪ್ಪಿಸಿಕೊಂಡಿರುವಅಬ್ದುಲ್ ಲತೀಫ್ 2015ರಲ್ಲಿ ಬ್ಯಾಂಕ್ ದರೋಡೆ ಮಾಡಿ 20 ಕೆ.ಜಿ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಏಳು ವರುಷ ಶಿಕ್ಷೆಯಾಗಿತ್ತು. ಆರೋಪಿಗಳಿಂದ ಕಬ್ಬಣದ ಕಟ್ಟಿಂಗ್ ಮಿಷನ್, ರಾಡ್, ಸ್ಕ್ರೂ ಡ್ರೈವರ್, ಕಬ್ಬಿಣದ ರಾಡ್ ಕತ್ತರಿಸುವ ಸ್ಪಾನರ್, ಹ್ಯಾಂಡ್ ಗ್ಲೌಸ್, ಸುತ್ತಿಗೆ, 2 ದೊಡ್ಡ ಬ್ಯಾಗ್ ಒಂದು ಸಣ್ಣ ಬ್ಯಾಗ್ ವಶಪಡಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಇಬ್ಬರು ಬಂಧಿತರನ್ನು ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.