ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ವಿದಾಯ ಹಾಗೂ ಸನ್ಮಾನ ಸಮಾರಂಭ


ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಕಳೆದ 29 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಎ.30ರಂದು ನಿವೃತ್ತರಾಗುತ್ತಿರುವ ಶ್ರೀಪತಿ ಭಟ್ ಐ. ಅವರಿಗೆ ವಿದಾಯ ಹಾಗೂ ಸನ್ಮಾನ ಸಮಾರಂಭ ಪಾಣಾಜೆ ವಿದ್ಯಾವರ್ಧಕ ಸಂಘ, ಸುಬೋಧ ಪ್ರೌಢಶಾಲೆ ಪಾಣಾಜೆ ಆಶ್ರಯದಲ್ಲಿ ಸುಬೋಧ ಸಭಾಭವನದಲ್ಲಿ ಶನಿವಾರ ನಡೆಯಿತು. 




 ಆಡಳಿತ ಮಂಡಳಿ ಹಾಗೂ ಸುಬೋಧ ಪ್ರೌಢಶಾಲಾ ವತಿಯಿಂದ ಶ್ರೀಪತಿ ಭಟ್ಟರಿಗೆ ಅತಿಥಿಗಳು ಶಾಲು ಹೊದೆಸಿ, ಹಾರ ಹಾಕಿ, ಪೇಟ ತೊಡಿಸಿ ಬೆಳ್ಳಿ ದೀಪ ಹಾಗೂ ಹಣ್ಣು ಹಂಪಲು ಹಾಗೂ ಅವರ ಧರ್ಮಪತ್ನಿಯವರಿಗೆ ಸೀರೆ ನೀಡಿ ಗೌರವಿಸಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಹೆಚ್.ಶ್ರೀಧರ್ ರೈ ಅವರು ಶ್ರೀಪತಿ ಭಟ್ ಅವರು ಸ್ಕೌಟಿಗೆ ನಿಧಿ ಇದ್ದ ಹಾಗೆ, ಅವರೊಂದು ಚೇತನ, ಮಕ್ಕಳಿಗೆ ಸಂಸ್ಕಾರ ಕೊಡುವ ಕೆಲಸ ತಿದ್ದುವ ಕೆಲಸ ಶಿಕ್ಷಕರದ್ದು ಎಂದು ಹೇಳಿ ಶ್ರೀಪತಿ ಭಟ್ ಅವರನ್ನು ಅಭಿನಂದಿಸಿದರು.



ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮುನತುಲ್ ಮೇಹ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಹಿರಿಯ ವಿದ್ಯಾರ್ಥಿಗಳು ಶ್ರೀಪತಿ ಭಟ್ಟರನ್ನು ಯಾವಾಗಲೂ ನೆನೆಯುತ್ತಾರೆ, ಗ್ರಾಮ ಪಂಚಾಯಿತಿನಲ್ಲಿ ಏನು ಕೆಲಸ ಇದ್ದರೂ ಅವರು ಬಂದು ಸಹಕರಿಸುತ್ತಾರೆ ಎಂದು ಹೇಳಿ ಶುಭ ಹಾರೈಸಿದರು.



. ಸುಬೋಧ ಪ್ರೌಢಶಾಲೆಯ ನಿವೃತ್ತ ಪ್ರಥಮ ಮುಖ್ಯ ಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್ ಅಭಿನಂದನಾ ಭಾಷಣ ಮಾಡುತ್ತಾ ಶ್ರೀಪತಿಯವರು ಬಹುಮುಖ ಪ್ರತಿಭೆಯ ವ್ಯಕ್ತಿ, ಶಿಕ್ಷಕ ವೃತ್ತಿಯಿಂದ ನಿವೃತ್ತರಾದರೂ ಮುಂದಿನ ಜೀವನದಲ್ಲಿ ತನ್ನ ಪ್ರತಿಭೆಯನ್ನು ಬಳಸಿಕೊಂಡು ಬೆಳಗಬೇಕು ಎಂದು ಶುಭ ಹಾರೈಸಿದರು. 
 ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಭಂಡಾರಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ.ಹಾಜಿ ಎಸ್. ಅಬೂಬಕ್ಕರ್ ಶಿಕ್ಷಕರಿಗೆ ಎಲ್ಲಿ ಹೋದರೂ ಗೌರವ ಸಿಗುತ್ತದೆ. ಆ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿಯು ಶಿಕ್ಷಕರಿಗಿದೆ ಎಂದು ಶುಭ ಹಾರೈಸಿದರು.




 ಶಾಲೆಯ ಹಿರಿಯ ವಿದ್ಯಾರ್ಥಿಗಳು, 8,9ನೇ ತರಗತಿಯ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ನೆಚ್ಚಿನ ಗುರುಗಳಿಗೆ ಶುಭ ಹಾರೈಸಿದರು.
 ಸನ್ಮಾನ ಹಾಗೂ ವಿದಾಯಕ್ಕೆ ಉತ್ತರಿಸುತ್ತಾ ಶ್ರೀಪತಿಯವರು ಸುಬೋಧ ಪ್ರೌಢಶಾಲೆಯಲ್ಲಿ ಹಾಗೂ ಪಾಣಾಜೆ ಗ್ರಾಮದಲ್ಲಿ ತನ್ನ ಸುದೀರ್ಘ ಅನುಭವಗಳನ್ನು ಸ್ಮರಿಸುತ್ತ ಸಂಬಂಧಪಟ್ಟ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
 ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಶ್ರೀಪತಿಯವರ ಕುಟುಂಬದ ಸದಸ್ಯರು ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
2002ನೇ ಬ್ಯಾಚ್ ವಿದ್ಯಾರ್ಥಿಗಳ ವತಿಯಿಂದ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು.


ದೀಪಿಕಾ ಮತ್ತು ಸಿಂಚನ ಪ್ರಾರ್ಥಿಸಿ ಶಾಲೆಯ ಸಂಚಾಲಕ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಜಿ.ಮಹಾಬಲೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ಸಹ ಶಿಕ್ಷಕಿ ನಿರ್ಮಲ ಕೆ. ವಂದಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಎಸ್ ಪಿ ನಿರೂಪಿಸಿದರು.